ಪೇನ್, ತಾಮಸ್ 
1737-1809. ರಾಜಕೀಯ ಬರಹಗಾರ. ತಂದೆ ಕೂವೆ ಹಗ್ಗ ಮಾಡುತ್ತಿದ್ದ ಸಣ್ಣ ರೈತ; ನಾರ್‍ಫೋಕಿನ ತೆಟ್‍ಫರ್ಡಿನವ. ತನ್ನ ಮೊನಚಾದ ಬರಹಗಳಿಂದ ಇಡೀ ಇಂಗ್ಲೆಂಡಿನಲ್ಲಿ ಹೆಚ್ಚಿನ ಜನದೂಷಣೆಗೆ ಒಳಗಾದ. ಹೊಟ್ಟೆ ಪಾಡಿಗಾಗಿ ಉಪಾಧ್ಯಾಯನಾದ, ಅಬ್ಕಾರಿ ಸುಂಕದವನಾದ. ಇನ್ನೂ ಏನೇನೋ ವೃತ್ತಿಗಳನ್ನವಲಂಬಿಸಿದ. ವಿವಾಹ ವಿಚ್ಛೇದ ಮಾಡಿಕೊಂಡು ಅಮೆರಿಕಕ್ಕೆ ಹೋದ (1774). ಅಲ್ಲಿ ಅಮೆರಿಕದ ಸ್ವಾತಂತ್ರ್ಯವನ್ನು ಕುರಿತ ತನ್ನ ಅಮೋಘ ಪ್ರಚಾರ ಪುಸ್ತಿಕೆ ಕಾಮನ್ ಸೆನ್ಸ್ ಎಂಬುದನ್ನು ಪ್ರಕಾಶಪಡಿಸಿದ (1776). ಅಮೆರಿಕದ ಸೇನೆಯಲ್ಲಿ ಕೆಲಸ ಮಾಡಿದ. ಫ್ರಾನ್ಸಿನ ನಿಯೋಗದ ಕಾರ್ಯದರ್ಶಿಯಾಗಿ (1781) ಹಾಗೂ ಇತರ ರಾಜಕೀಯ ಹುದ್ದೆಗಳಲ್ಲಿ ದುಡಿದ. ಇಂಗ್ಲೆಂಡಿಗೆ ಹಿಂತಿರುಗಿ ಎಡ್ಮಂಡ್ ಬರ್ಕನ ರಿಫ್ಲೆಕ್ಷನ್ಸ್ ಅನ್ ದಿ ಫ್ರಂಚ್ ರೆವಲೂಷನ್ ಎಂಬ ಪುಸ್ತಕಕ್ಕೆ ಉತ್ತರವಾಗಿ ತನ್ನ ರೈಟ್ಸ್ ಆಫ್ ಮ್ಯಾನ್ (1790-92) ಎಂಬ ಪುಸ್ತಕವನ್ನು ಪ್ರಚುರ ಪಡಿಸಿದ. ಅದು ತುಂಬ ಜನಪ್ರಿಯವಾಯಿತು. ಇಂಗ್ಲೆಂಡ್ ಒಂದರಲ್ಲೆ ಅದರ 15 ಲಕ್ಷ ಪ್ರತಿಗಳು ಮಾರಾಟವಾದುವು. ಆದರೆ ನ್ಯಾಯಾಲಯದ ಮುಂದೆ ನಿಲ್ಲುವುದನ್ನು ತಪ್ಪಿಸಿಕೊಳ್ಳಲು ಫ್ರಾನ್ಸಿಗೆ ಓಡಿದ. ಅಲ್ಲಿನ ರಾಷ್ಟ್ರೀಯ ಸಭೆಯ ಸದಸ್ಯನಾಗಿ ಚುನಾಯಿತನಾದ. ಹದಿನಾರನೆಯ ಲೂಯಿಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ವಿರೋಧಿಸಿದ. ರಾಬಸ್ ಪೇದನಿಂದ 1794 ರಲ್ಲಿ ಬಂದಿಖಾನೆ ಸೇರಿದ. ಅವನ ಪತನಾನಂತರ ಬಿಡುಗಡೆ ಹೊಂದಿದ. ಆಗತಾನೆ ತನ್ನ ದಿ ಏಜ್ ಆಫ್ ರೀಸನ್ ಪುಸ್ತಕದ ಮೊದಲ ಭಾಗವನ್ನು ಬರೆದು ಮುಗಿಸಿದ್ದ. 1795 ಮತ್ತು 1797 ರಲ್ಲಿ ಅದರ ಉಳಿದ ಎರಡು ಭಾಗಗಳನ್ನು ಬರೆದ. ಈ ಪುಸ್ತಕ ಕೂಡ ಕ್ರೈಸ್ತ ಮತವನ್ನು ನಿರೀಶ್ವರವಾದವನ್ನು ಖಂಡಿಸಿ ದೈವೀಕರಣವನ್ನು ಎತ್ತಿ ಹಿಡಿಯಿತು. ಫ್ರೆಂಚ್ ರಾಜಕೀಯದಿಂದ ಜುಗುಪ್ಸೆಗೊಂಡು ಅಮೆರಿಕಕ್ಕೆ ಹಿಂತಿರುಗಿದ (1802). ಅಲ್ಲಿ ಸಮಾಜ ಇವನನ್ನು ಬಹಿಷ್ಕರಿಸಿತು. ಫೆಡರಲ್ ಪಾರ್ಟಿಯನ್ನು ವಿರೋಧಿಸಿದ್ದರಿಂದ ರಾಜಕೀಯವಾಗಿ ಸಹ ಈತ ಜನರ ವಿಶ್ವಾಸವನ್ನು ಕಳೆದುಕೊಂಡ.

ಈತ ಸತ್ತಿದ್ದು ನ್ಯೂಯಾರ್ಕಿನಲ್ಲಿ.

ಪೇನ್ ನಿಷ್ಕಪಟಿ. ಧೈರ್ಯಶಾಲಿ. ಅವನ ಬರಹಗಳಲ್ಲಿ ಇದನ್ನು ಕಾಣಬಹುದು. ಆದರೆ ಅವನು ಒಣ ಹೆಮ್ಮೆಯವ, ಪೂರ್ವಾಗ್ರಹ ಪೀಡಿತ. ನಿರರ್ಗಳವೂ ಸತ್ತ್ವಯುತವೂ ಆದ ಅವನ ಶೈಲಿಯಿಂದಾಗಿ ಅವನ ಪುಸ್ತಕಗಳು ಜನಪ್ರಿಯವಾದುವು.
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

(ಡಿ.ಎನ್.ಎ.; ಯು.ಜಿ.ಎಂ.)